ಓಮಗ್ರಂಥಿ: ನಿಜಗೆಲಸ ಏನೆಂದು ಸರಿಯಾಗಿ ಗೊತ್ತಿರದ, ಚಪ್ಪಟೆಯಾದರೂ ಅಡ್ಡಾದಿಡ್ಡಿಯಾಗಿ, ಮೆತ್ತಗಿರುವ ಗ್ರಂಥಿ (ತೈಮಸ್). ಎದೆಚಕ್ಕೆಯ (ಸ್ಟರ್ನ್ಂ) ಹಿಂದೆ ಉಸಿರ್ನಾಳ, ದೊಡ್ಡ ರಕ್ತನಾಳಗಳು. ಹೃದಯದ ಕವಚದ ಮುಂದೆ ಇದರಲ್ಲಿ ಅಸಮಗಾತ್ರದ ಎರಡು ಹಾಲೆಗಳಿವೆ (ಲೋಬ್ಸ್‌). ಮಾಂಸಾಹಾರಿಗಳಿಗೆ ರುಚಿಕರವಾಗಿ ಮೆದುವಾಗಿ ಮಾಂಸ ತುಂಬಿದ ಅಂಗವಿದು. ಆದ್ದರಿಂದಲೇ ಇದನ್ನೂ ಮಾಂಸಲಿ (ಸ್ವೀಟ್ ಬ್ರೆಡ್) ಎನ್ನುವುದುಂಟು. ಹೊಟ್ಟೆಯೊಳಗೂ ಒಂದು ಮಾಂಸಲಿ (ಪ್ಯಾಂಕ್ರಿಯಾಸ್) ಇರುವುದರಿಂದ ತೈಮಸನ್ನು ಕೊರಳಿನ ಮಾಂಸಲಿ ಎಂದಿದೆ. ವಯಸ್ಸಾದಂತೆಲ್ಲ ಈ ಗ್ರಂಥಿಯ ಗಾತ್ರದಲ್ಲಿ ಬಹಳ ಬದಲಾವಣೆ ಆಗುವುದು. ಆಗತಾನೇ ಹುಟ್ಟಿದ ಕೂಸಿನಲ್ಲಿ ಬಲು ದೊಡ್ಡದಾಗಿರುತ್ತದೆ. ಮೊದಲ ಎರಡು ವರ್ಷಗಳಲ್ಲಿ ಇದರ ಬೆಳೆವಣಿಗೆ ತೀವ್ರ ವಯಸ್ಸಿಗೆ ಬರುವ ಹೊತ್ತಿಗೆ ತುತ್ತತುದಿಗೇರುವುದು. ಆಮೇಲೆ ಬರುಬರುತ್ತ ಮುರುಟಿಕೊಳ್ಳುತ್ತ ಹೋಗಿ ಕೊನೆಗೆ ನೆಪಮಾತ್ರವಾಗಿ ಉಳಿದಿರುತ್ತದೆ. ಒಬ್ಬೊಬ್ಬರಲ್ಲೂ ಒಂದೊಂದು ಗಾತ್ರ, ತೂಕಕ್ಕಿರುವುದು. ಅದಕ್ಕದೇ ಹೀಗೆ ಮುರುಟಿಕೊಳ್ಳುವುದರ ಜೊತೆಗೆ, ಇದ್ದಕ್ಕಿದ್ದ ಹಾಗೆ ಸೋಂಕು, ವಿಷವೇರಿಕೆ, ಕಟ್ಟಾ ಉಪವಾಸಗಳಿಂದಲೂ ಹೀಗಾಗುವ ವರದಿಗಳಿವೆ. 

 ರಚನೆ 
ಕೂಡಿಸುವ ಊತಕದ ಕವಚದಿಂದಾದ ಸೂಕ್ಷ್ಮ ವಿಭಾಗಗಳ ಒಳಗಡೆ ಸಾವಿರಾರು ಕಿರುಹಾಲೆಗಳಿರುವುವು (ಲಾಬ್ಯೂಲ್ಸ್‌). ಇವುಗಳ ಅಡ್ಡಳತೆ 2 ಮಿಮೀ ಮೀರಿರದು. ಕಿರುಹಾಲೆಗಳಲ್ಲಿಯ ಗ್ರಂಥಿ ಹೊರಪದರದಂತಿರುವ ರಗಟೆಯಾಗಿಯೂ (ಕಾರ್ಟೆಕ್ಸ್‌) ಒಳಗಣ ತಿರುಳಾಗಿಯೂ (ಮೆಡುಲ) ವಿಂಗಡವಾಗಿ ಕಾಣುವುದು. ಇದರಲ್ಲಿ ನವಿರ್ಜಾಲಕಣಗಳೂ (ರೆಟಿಕ್ಯುಲೋಸೈಟ್ಸ್‌) ಹಾಲುರಸಕಣಗಳೂ (ಲಿಂಫೊಸೈಟ್ಸ್‌) ಇವೆ. ಹಿರಿಯ ನವಿರ್ಜಾಲಕಣಗಳ ಬಲೆಗಟ್ಟಿನಲ್ಲಿ ಹಾಲುರಸಕಣಗಳು ಸಿಕ್ಕಬಿದ್ದಂತಿರುವುವು. ಕಿರುಹಾಲೆಗಳ ರಗಟೆಯಲ್ಲಿ ಹಾಲುರಸಕಣಗಳು ದಟ್ಟವಾಗಿ ಕಿಕ್ಕಿರಿದಿವೆ. ತಿರುಳಿನಲ್ಲಿ ಹಾಲುರಸಕಣಗಳಿಗಿಂತಲೂ ನವಿರ್ಜಾಲಕಣಗಳೇ ಹೆಚ್ಚು. ಬೇರೆಡೆಯ ನವಿರ್ಜಾಲಗಳಿಗೂ ಇಲ್ಲಿನವಕ್ಕೂ ಅವುಗಳ ವಿಕಾಸದಲ್ಲಿ ವ್ಯತ್ಯಾಸಗಳಿವೆ. ಪಿಂಡವಿಕಾಸದಲ್ಲಿ ಇಲ್ಲಿನವು ಮೇಲ್ಪೊರೆಯಿಂದ (ಎಪಿತೀಲಿಯಂ) ಬರುವುದೇ ಹೊರತು ಮಿಕ್ಕವಂತೆ ನಡುರಚನಾಂಶದಿಂದ (ಮೀಸೆಂಕೈಮ) ಹುಟ್ಟವು. ಆಕಾರ, ವರ್ತನೆಗಳಲ್ಲೂ ಹಾಲುರಸಮಂಡಲದ ಹಾಲುರಸಕಣಗಳನ್ನೇ ಇವೆಲ್ಲವೂ ಹೋಲುವುವು. ಗ್ರಂಥಿಯ ನಡುಗಡೆಯಲ್ಲಿ ಹ್ಯಾಸಲನ ಗೋಳಕಗಳಿವೆ (ಕಾರ್ಪಸೆಲ್ಸ್‌). ಇವುಗಳ ಕೆಲಸವೇನೆಂದು ತಿಳಿದಿಲ್ಲ. ಓಮಗ್ರಂಥಿಗೆ ರಕ್ತನಾಳ ಪುರೈಕೆ ಅಪಾರ. ಇದು ಮುರುಟಿಕೊಂಡಾಗ ಗ್ರಂಥಿವಸ್ತುವೆಲ್ಲ ಬದಲಾಗಿ ಕೊಬ್ಬುಗೂಡಿರುವುದು. ರಗಟೆಯಲ್ಲಿ ಮೊದಲಾಗಿ ಕುಸುರಿಯಲ್ಲಿ ಕೊನೆಗೊಳ್ಳುತ್ತದೆ. ಕೊನೆಗೆ ಇಡೀ ಗ್ರಂಥಿ ಕೊಬ್ಬುಗೂಡಿ ನಟ್ಟನಡುವೆ ಉಳಿದ ಚೂರಲ್ಲಿ ಹ್ಯಾಸಲನ ಗೋಳಕಗಳಿರುತ್ತವೆ. 
ಕೆಲವು ಅಸಹಜತೆಗಳು: ಕೆಲವು ವೇಳೆ ಈ ಗ್ರಂಥಿಯ ಊತಕ (ಟಿಶ್ಯೂ) ಇತರ ಅಂಗಗಳಲ್ಲಿಯೂ ಕಂಡುಬರುವುದು. ಉದಾಹರಣೆಗೆ - 1. ಗುರಾಣಿಕ ಗ್ರಂಥಿ ಮತ್ತು ಶ್ವಾಸಕೋಶಗಳಲ್ಲಿ: 2. ಗ್ರಂಥಿಯ ಒಂದು ಭಾಗ, ಕೆಲವು ವೇಳೆ ಎರಡು ಭಾಗಗಳೂ ಕಿರಿದಾಗಿರಬಹುದು; 3. ಅಪುರ್ವವಾಗಿ ಈ ಗ್ರಂಥಿ ಕೆಲವರಲ್ಲಿ ಇಲ್ಲದೆಯೇ ಹೋಗಬಹುದು.

 ಹುಟ್ಟು ಅಥವಾ ಭ್ರೂಣವಿಜ್ಞಾನ (ಎಂಬ್ರಿಯಾಲಜಿ) 
ಓಮ ಗ್ರಂಥಿ ಮೂರನೆಯ ಬ್ರಾಂಕಿಯಲ್ ಪೌಚಿನಿಂದ ಉಗಮಗೊಳ್ಳುತ್ತದೆ. ಅದರಲ್ಲಿ ಇರಡು ಎಪಿಥೀಲಿಯಲ್ ಜೀವಕೋಶಗಳಿವೆ. ಇವು ಮೊದಲಿಗೆ ಕೊಳವೆಯಾಕಾರದಲ್ಲಿ ರೂಪ ತಾಳುತ್ತವೆ. ಅನಂತರ ಘನರೂಪ ತಳೆದು ಕೆಳಮುಖವಾಗಿ ಮೀಸೆಂಕೈಮದ ಆವರಣದೊಳಗೆ ಬೆಳೆಯುತ್ತವೆ. ಮೀಸೆಂಕೈಮದ ಲಸಿಕೆಯ ಜೀವಕೋಶಗಳು ಅದರೊಳಗೆ ಪ್ರವೇಶಿಸಿ ಮೊದಲೇ ಇದ್ದ ಒತ್ತುಕಟ್ಟಾದ ಎಪಿಥೀಲಿಯಲ್ ಜೀವಕೋಶಗಳನ್ನು ಬೇರ್ಪಡಿಸುತ್ತವೆ. ಇದರಿಂದಾಗಿ ಘನರೂಪದ ಜೀವಕೋಶಗಳು ಬಲೆಯಾಕಾರವನ್ನು ತಾಳುತ್ತವೆ. ಓಮಗ್ರಂಥಿಯಲ್ಲಿ ಲಸಿಕೆಯ ಜೀವಕೋಶಗಳು ಮೊಟ್ಟಮೊದಲಿಗೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಭ್ರೂಣಾವಸ್ಥೆಯ ಮೂರನೆಯ ತಿಂಗಳಲ್ಲಿ.
 ನಿಜಗೆಲಸ 
 ಪ್ರತಿರೋಧಕ ಕಾರ್ಯಗಳು 
ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಮತ್ತು ಮನುಷ್ಯದೇಹದಲ್ಲಿ ನಡೆಸಿದ ವೀಕ್ಷಣೆಗಳಿಂದ ಓಮಗ್ರಂಥಿ ಪ್ರತಿರೋಧಕ ಶಕ್ತಿಯ ಬೆಳೆವಣಿಗೆಯಲ್ಲಿ ಪ್ರಮುಖಪಾತ್ರವನ್ನು ವಹಿಸುತ್ತದೆಂದು ತಿಳಿದುಬಂದಿದೆ. ಮಗುವಿನ ಜನನಪುರ್ವದ ಅಥವಾ ಜನನಾಂತರದ ಕೆಲವೇ ದಿವಸಗಳಲ್ಲಿ ಇದರ ಪ್ರಭಾವ ಶರೀರದಲ್ಲಿ ಕಂಡುಬರುತ್ತದೆ. ಈ ಪ್ರಭಾವ ಕಂಡು ಬರುವ ಕಾಲ ಬೇರೆ ಬೇರೆ ಪ್ರಾಣಿಜಾತಿಗಳಲ್ಲಿ ವ್ಯತ್ಯಾಸ ಹೊಂದುತ್ತವೆ.

ವಯಸ್ಕ ಪ್ರಾಣಿಗಳಲ್ಲಿ ಓಮಗ್ರಂಥಿಯನ್ನು ತೆಗೆದಾಗ ಯಾವ ವಿಶೇಷ ಪರಿಣಾಮ ಉಂಟಾದುದೂ ಕಂಡುಬಂದಿಲ್ಲ. ಆದರೆ ಆಗತಾನೆ ಹುಟ್ಟಿದ ಇಲಿಗಳಲ್ಲಿ ಮತ್ತು ಇತರ ದಂಶಕವರ್ಗದ ಪ್ರಾಣಿಗಳಲ್ಲಿ ಈ ಗ್ರಂಥಿಯನ್ನು ತೆಗೆದುಹಾಕಿದಾಗ ರಕ್ತದಲ್ಲಿ ಮತ್ತು ಲಸಿಕೆಯಲ್ಲಿ ಲಸಿಕೆಯ ಜೀವಕೋಶಗಳು ವಿರಳವಾದುವಲ್ಲದೆ ಊತಕಗಳು ರೋಧವಸ್ತುಗಳನ್ನು (ಆಂಟಿಬಾಡೀಸ್) ಉತ್ಪತ್ತಿಮಾಡುವ ಶಕ್ತಿಯನ್ನು ಕಳೆದುಕೊಂಡುವು; ಮತ್ತು ಚರ್ಮದ ಸ್ವಜಾತಿ ಕಸಿಗೆ (ಹೋಮೋಗ್ರಾಫ್ಟ್‌) ಅವುಗಳಲ್ಲಿ ವಿರೋಧ ಕಂಡುಬರಲಿಲ್ಲ. ಕ್ರಮೇಣ ಆ ಪ್ರಾಣಿಗಳ ಬೆಳೆವಣಿಗೆ ಕುಗ್ಗಿ ತಿಂಗಳೊಳಗೆ ಅವು ಸತ್ತುಹೋದುವು. ಮತ್ತೆ ಅದೇ ಬಗೆಯ ಓಮಗ್ರಂಥಿಗಳನ್ನು ಅವುಗಳ ದೇಹಕ್ಕೆ ಕಸಿ ಮಾಡಿದಾಗ ಮೇಲೆ ಹೇಳಿದ ದೋಷಗಳು ಕಡಿಮೆಯಾದುವು. ಇಲ್ಲವೆ ಅದೇ ಜಾತಿಯ ಲಸಿಕೆಯ ಜೀವಕೋಶ ಅಥವಾ ರಕ್ತದ ಜೀವಕೋಶಗಳನ್ನು ಉತ್ಪತ್ತಿಯಾಗುವ ಜೀವಕೋಶಗಳನ್ನು ಈ ಪ್ರಾಣಿಗಳಿಗೆ ಚುಚ್ಚಿದಾಗ ದೋಷಗಳು ಪುರ್ಣವಾಗಿ ಮಾಯವಾದುದು ಕಂಡುಬಂದಿತು.

ರೋಧಶಕ್ತಿ ಓಮಗ್ರಂಥಿಗೆ ಹೇಗೆ ಪ್ರಾಪ್ತವಾಗುತ್ತದೆಂಬುದು ಖಚಿತವಾಗಿ ತಿಳಿದುಬಂದಿಲ್ಲ. ಈ ಗ್ರಂಥಿಗಳು ಲಸಿಕೆಯ ಜೀವಕೋಶಗಳು. ಲಸಿಕೆಯ ಗ್ರಂಥಿ ಮತ್ತು ಗುಲ್ಮಗಳಿಗೆ ವಲಸೆಹೋಗುತ್ತವೆ. ದೇಹದ ಇತರ ಅಂಗಗಳಲ್ಲಿ ಉತ್ಪತ್ತಿಯಾಗುವ ಲಸಿಕೆಯ ಜೀವಕೋಶಗಳ ಮೇಲೂ ಈ ಗ್ರಂಥಿ ತನ್ನ ಪ್ರಭಾವ ಬೀರಬಹುದು. ಅಲ್ಲದೆ ಇದರಲ್ಲಿ ಒಂದು ಬಗೆಯ ವಸ್ತು (ಹ್ಯೂಮರಲ್ ಫ್ಯಾಕ್ಟರ್) ಉತ್ಪತ್ತಿಯಾಗಿ ಶಕ್ತಿಯನ್ನು ಇತರ ಲಸಿಕೆಯ ಕೇಂದ್ರಗಳಿಗೆ ಒಯ್ಯಬಹುದು.

 ಒಳಸುರಿಕೆ ಕಾರ್ಯಗಳು 
ಲಸಿಕೆಯ ಜೀವಕೋಶಗಳನ್ನು ಉತ್ಪತ್ತಿಮಾಡುವುದಲ್ಲದೇ ಗ್ರಂಥಿಯ ಬೇರೆ ಕಾರ್ಯವೇನೆಂಬುದು ಸರಿಯಾಗಿ ತಿಳಿದುಬಂದಿಲ್ಲ. ಇದು ಚೋದನಿಕಗಳನ್ನು (ಹಾರ್ಮೋನ್ಸ್‌) ಉತ್ಪತ್ತಿಮಾಡುವುದೇ ಇಲ್ಲವೆ ಎಂಬ ವಿಷಯದಲ್ಲಿ ಒಮ್ಮತವಿಲ್ಲ. ಓಮಗ್ರಂಥಿಗೂ ಇತರ ಒಳಸುರಿಕ ಗ್ರಂಥಿಗಳಿಗೂ ಅನೇಕ ವಿಧವಾದ ಪರಸ್ಪರ ಸಂಬಂಧವಿರುವುದು ಕಂಡುಬಂದಿದೆ. ಜನನಪುರ್ವದ, ಜನನಾಂತರದ ಹಾಗೂ ವಯಸ್ಕ ಪ್ರಾಣಿಗಳಲ್ಲಿ ಆಡ್ರಿನಲ್ ಕಾರ್ಟಿಕಲ್ ಗ್ರಂಥಿಯ ಕಾರ್ಯಚಟುವಟಿಕೆಗೂ ಓಮಗ್ರಂಥಿಯ ಗಾತ್ರಕ್ಕೂ ಪ್ರತಿಲೋಮ ಸಂಬಂಧವಿರುವುದು (ಇನ್ವರ್ಸ್ ರಿಲೇಶನ್) ಕಂಡುಬಂದಿದೆ. ಆಡ್ರಿನಲ್ ಕಾರ್ಯಚಟುವಟಿಕೆ ಕುಗ್ಗಿದಾಗ ಇವುಗಳ ಗಾತ್ರ ಹೆಚ್ಚಾಗುತ್ತದೆ. ನಿರ್ವೀರ್ಯಕರಣದಿಂದ (ಕ್ಯಾಸ್ಟ್ರೇಶನ್) ಅಥವಾ ಗುರಾಣಿಕ ಗ್ರಂಥಿಯನ್ನು ತೆಗೆದುಹಾಕುವುದರಿಂದ ಓಮಗ್ರಂಥಿಯ ಗಾತ್ರ ದೊಡ್ಡದಾಗುತ್ತದೆ. ಕೆಲವು ಪ್ರಾಣಿಗಳಲ್ಲಿ ಓಮಗ್ರಂಥಿಯನ್ನು ತೆಗೆದಾಗ ಜನನಾಂಗಗಳು, ಆಡ್ರಿನಲ್ ಕಾರ್ಟೆಕ್ಸ್‌ ಮತ್ತು ಗುರಾಣಿಕ ಗ್ರಂಥಿಗಳು ದೊಡ್ಡದಾಗುತ್ತವೆ ಮತ್ತು ದೈಹಿಕ ಬೆಳೆವಣಿಗೆ ಕುಗ್ಗುತ್ತದೆ. ಪ್ರಾಯಪುರ್ವದಲ್ಲಿ ಈ ಗ್ರಂಥಿಯ ಬೆಳೆವಣಿಗೆ ಅತಿ ಹೆಚ್ಚಾಗಿರುವುದರಿಂದ ದೈಹಿಕ ಬೆಳೆವಣಿಗೆಯಲ್ಲಿ ಇದರ ಪಾತ್ರವಿರಬಹುದೆಂದು ಕೆಲವರು ಅಭಿಪ್ರಾಯಪಡುತ್ತಾರೆ.

 ರೋಗಗಳು 
ಓಮಗ್ರಂಥಿಯಿಂದ ದೇಹದ ಆರೋಗ್ಯದಲ್ಲಾಗುವ ಏರಿಳಿತಗಳು ಅಷ್ಟೇನೂ ಗಮನಾರ್ಹವಾದುವಲ್ಲ. ವಿರಳವಾಗಿ ಗ್ರಂಥಿಯಲ್ಲಿ ಗಂಟುಗಳು (ಟ್ಯೂಮರ್ಸ್) ಮತ್ತು ಹುಣ್ಣುಗಳು ಕಾಣಿಸಿಕೊಳ್ಳುವುವು. ಮಯಸ್ತೀನಿಯ ಕಾಯಿಲೆಗೆ ಇದು ಕೆಲವು ವೇಳೆ ಕಾರಣವಾಗಬಹುದು. ಓಮಗ್ರಂಥಿ ಉಸಿರುಗಟ್ಟುವಿಕೆಯಿಂದುಂಟಾಗುವ ಸಾವಿಗೆ ಕಾರಣವೆಂದು ಹಿಂದೆ ತಿಳಿದಿದ್ದರು. ಆದರೆ ಇದನ್ನು ದೃಢಪಡಿಸುವ ಖಚಿತ ಸಾಕ್ಷಿಗಳಿಲ್ಲ.
ಪ್ರಾಣಿಗಳಲ್ಲಿ ಈ ಗ್ರಂಥಿಯ ಅಭಾವದಿಂದ ಅಸಹಜವಾದ ಪ್ರತಿನಿರೋಧಕ ಪ್ರತಿಕ್ರಿಯೆ (ಅಬ್ನಾರ್ಮಲ್ ಇಮ್ಯೂನ್ ರೆಸ್ಪಾನ್ಸಸ್) ಕಂಡುಬರುವುದೆಂದು ಈಚಿನ ಸಂಶೋಧನೆಗಳಿಂದ ತಿಳಿದುಬಂದಿದೆ. ಇದರ ಹಿಗ್ಗುವಿಕೆ ಮತ್ತು ಕುಗ್ಗುವಿಕೆಗಳು ದೈಹಿಕ ಆರೋಗ್ಯದಲ್ಲಿ ವಿವಿಧ ರೀತಿಯ ಬದಲಾವಣೆಗಳನ್ನು ತರುತ್ತವೆಯಾದರೂ ಅವುಗಳ ಕಾರ್ಯ ಕಾರಣ ಸಂಬಂಧ ನಿರ್ದಿಷ್ಟವಾಗಿಲ್ಲ.

 ಅನವಶ್ಯಕ ಬೆಳೆವಣಿಗೆ ಅಥವಾ ಗಂಟುಗಳು 
ಓಮಗ್ರಂಥಿಯ ಗಂಟುಗಳಿಗೆ ಥೈಮೋಮಾಸ್ ಎಂದು ಹೆಸರು. ಅವುಗಳಲ್ಲಿ ಕಂಡುಬರುವ ಪ್ರಮುಖ ಜೀವಕೋಶಗಳ ಆಧಾರದ ಮೇಲೆ ಗಂಟುಗಳನ್ನು ವಿಭಜಿಸಲಾಗುತ್ತದೆ. 20 ವರ್ಷ ವಯಸ್ಸಿಗಿಂತ ಕಡಿಮೆಯ ವ್ಯಕ್ತಿಗಳಲ್ಲಿ ಇವು ಕಾಣಿಸುವುದು ವಿರಳ. ಈ ಗಂಟುಗಳು ದೇಹದ ಇತರ ದೂರದ ಅಂಗಗಳಿಗೆ ವ್ಯಾಪಿಸುವುದು ಕಡಿಮೆ. ಆದರೆ ಅಕ್ಕಪಕ್ಕದ ಅಂಗಗಳು ಇದರ ಬಾಧೆಗೊಳಗಾಗಬಹುದು. ಈ ರೋಗದ ಚರ್ಯೆಯನ್ನು ಕೇವಲ ಅದರ ಜೀವಕೋಶಗಳ ರಚನೆಯ ಆಧಾರದಿಂದಲೇ ವಿವರಿಸಲಾಗುವುದಿಲ್ಲ. ಈ ಗಂಟುಗಳು ಕಾಣಿಸಿಕೊಂಡಾಗ ಎದೆಯ ಭಾಗದ ಅಂಗಗಳ ಮೇಲೆ ಒತ್ತಡವುಂಟಾದ ಅನುಭವವಾಗುತ್ತದೆ. ಮತ್ತೆ ಕೆಲವು ಬಾರಿ ಈ ಚಿಹ್ನೆಗಳು ಕಾಣಿಸಿಕೊಳ್ಳದೆಯೂ ಇರಬಹುದು. ಆಗ ಎಕ್ಸ್‌ಕಿರಣ ಪರೀಕ್ಷೆಯಿಂದ ಅದನ್ನು ಪತ್ತೆಹಚ್ಚಬಹುದು. ಶಸ್ತ್ರಕ್ರಿಯೆಯಿಂದ ತೆಗೆದುಹಾಕಿದಾಗ ಅದು ಇತರ ಭಾಗಗಳಿಗೆ ವ್ಯಾಪಿಸದಿದ್ದಲ್ಲಿ ದೇಹಕ್ಕೆ ಯಾವ ಅಪಾಯವೂ ಉಂಟಾಗದು.

ದೇಹದ ಇತರ ಅನೇಕ ಕಾಯಿಲೆಗಳ ಜೊತೆಗೆ ಈ ಗಂಟುಗಳೂ ಇರಬಹುದು. ಅವುಗಳ ನಡುವಣ ಸಂಬಂಧ ಕೇವಲ ಆಕಸ್ಮಿಕವಾಗಿರಬಹುದು; ಕೆಲವು ವೇಳೆ ಆಕಸ್ಮಿಕವಲ್ಲದೆಯೂ ಇರಬಹುದು. ಕೆಲವು ಮಯಸ್ತೀನಿಯ ಗ್ರೆವಿಸಿನಿಂದ ನರಳುತ್ತಿರುವ ರೋಗಿಗಳಲ್ಲಿ ಓಮಗ್ರಂಥಿಯ ಗಂಟುಗಳು ಕಂಡುಬಂದಿವೆ. ಕೆಲವರಲ್ಲಿ ಗ್ರಂಥಿಗಳು ದೊಡ್ಡದಾಗಿರುವುದೂ ಉಂಟು. ಈ ಗಂಟುಗಳನ್ನು ಶಸ್ತ್ರ ಚಿಕಿತ್ಸೆಯಿಂದ ತೆಗೆದಾಗ ಕಾಯಿಲೆಯಲ್ಲಿ ಗುಣ ಕಂಡುಬಂದಿತಲ್ಲದೆ ಕೆಲವರಿಗೆ ಪುರ್ತಿ ವಾಸಿಯಾಗಿರುವುದೂ ಉಂಟು. ಈ ರೋಗದಿಂದ ಬಳಲುತ್ತಿರುವ 40 ವರ್ಷದ ಕೆಳಗಿನ ಹೆಂಗಸರಲ್ಲಿ ಓಮಗ್ರಂಥಿಯ ಗಂಟುಗಳಿಲ್ಲದಿದ್ದರೂ ಗ್ರಂಥಿಯನ್ನು ತೆಗೆದುಹಾಕಿದಾಗ ಕಾಯಿಲೆ ಗುಣವಾಗಿರುವುದು ಕಂಡುಬಂದಿದೆ. ಅಪರಿಹಾರ್ಯವಾದ ರಕ್ತಹೀನತೆಯಲ್ಲೂ ಓಮಗ್ರಂಥಿಯ ಪಾತ್ರವಿದೆಯೆಂಬುದು ಕಂಡುಬಂದಿದೆ. ಈ ಗಂಟುಗಳನ್ನು ತೆಗೆದಾಗ ಮೂರರಲ್ಲಿ ಒಂದು ಭಾಗ ರೋಗಿಗಳಲ್ಲಿ ಗುಣ ಕಂಡುಬಂದಿತು. ರಕ್ತದ ಏಡಿಗಂತಿಗೆ ಈ ಗ್ರಂಥಿ ಕೆಲವು ವೇಳೆ ಕಾರಣವಾಗಬಹುದೆಂಬುದು ಪ್ರಾಣಿಗಳಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದ್ದರೂ ಮನುಷ್ಯನ ವಿಷಯದಲ್ಲಿ ಅದು ಖಚಿತವಾಗಿಲ್ಲ.

 ಥೈಮೊಲಿಪೊಮ 
ಓಮಗ್ರಂಥಿಯಲ್ಲಿ ವಿರಳವಾಗಿ ಉಂಟಾಗುವ ಈ ಬಗೆಯ ಗಂಟು ವಿಶೇಷವಾಗಿ 10-15 ವರ್ಷದ ಮಕ್ಕಳಲ್ಲಿ ಕಂಡುಬರುತ್ತದೆ. ಇದು ಕೊಬ್ಬು ಮತ್ತು ಓಮಗ್ರಂಥಿಯ ಜಾಲಗಳಿಂದ ಕೂಡಿದೆ. ಇದಕ್ಕೆ ಹೊರಕವಚ ಇದೆ. ಕೆಮ್ಮು, ದಮ್ಮು ಮತ್ತು ನೋವುಗಳಿಗೆ ಇದು ಕಾರಣವಾಗಬಹುದು. ಎಕ್ಸ್‌ಕಿರಣ ಪರೀಕ್ಷೆಯ ಮೂಲಕ ಇದನ್ನು ಪತ್ತೆಹಚ್ಚಬಹುದು. ಈ ಗಂಟು ತುಂಬ ದೊಡ್ಡದಾಗಿ ಬೆಳೆದರೂ ಅಷ್ಟೇನೂ ಅಪಾಯಕಾರಿಯಲ್ಲ.

 ಉಸಿರುಕಟ್ಟುವಿಕೆ 
ಓಮಗ್ರಂಥಿ ಉಸಿರುಕಟ್ಟುವಿಕೆಗೆ ಕಾರಣವಾಗುತ್ತದೆಂಬ ಭಾವನೆ ಹಿಂದೆ ಇತ್ತು. ಆದರೆ ಸಂಶೋಧನೆಗಳಿಂದ ಅದು ನಿರಾಧಾರವೆನಿಸಿದೆ. ಉಸಿರುಗಟ್ಟುವಿಕೆ ಯಿಂದಾಗುವ ಸಾವಿಗೆ, ಓಮಗ್ರಂಥಿ ದೊಡ್ಡದಾಗಿದ್ದರೂ ಬೇರೆಯೇ ಕಾರಣಗಳಿದ್ದುವು. ಕೆಲವು ವೇಳೆ ಚಿಕ್ಕ ಮಕ್ಕಳಲ್ಲಿ, ಓಮಗ್ರಂಥಿ ದೊಡ್ಡದಾಗಿದ್ದು ಶ್ವಾಸನಾಳದ ಮೇಲೆ ಒತ್ತುವುದರಿಂದ ಉಸಿರಾಡಲು ತೊಂದರೆಯಾಗಬಹುದು.

ಹುಟ್ಟಿನಿಂದುಂಟಾಗುವ ಪ್ರತಿರೋಧಕ ಕಾಯಿಲೆಗಳಿಗೆ ಓಮಗ್ರಂಥಿ ಕಾರಣವಿರ ಬಹುದೆಂದು ಕೆಲವರ ಅಭಿಪ್ರಾಯ. ಇಂಥ ಕಾಯಿಲೆಯಲ್ಲಿ ಎರಡು ವಿಧಗಳಿವೆ; (1) ಹುಡುಗರಲ್ಲಿ ಮಾತ್ರ ಕಂಡುಬರುವುದು. (2) ಸ್ವಿಸ್ ಮಾದರಿಯ ಹುಡುಗ ಹುಡುಗಿಯರಲ್ಲಿ ಕಂಡುಬರುವಂಥದು. ಮೊದಲನೆಯದಲ್ಲಿ ಓಮಗ್ರಂಥಿಗೆ ಸಂಬಂಧಿಸಿದಂತೆ ಯಾವ ದೋಷವೂ ಇರುವುದಿಲ್ಲ. ಆದರೆ ಎರಡನೆಯದು ಓಮಗ್ರಂಥಿ ಬಹಳ ಹಿರಿದಾಗಿರುತ್ತದೆ. ಜೊತೆಗೆ ಅದರಲ್ಲಿ ಲಸಿಕೆಯ ಜೀವಕೋಶಗಳೂ ತುಂಬ ಕಡಿಮೆ ಅಥವಾ ಇಲ್ಲದೆಯೇ ಇರಬಹುದು. ಈ ಕಾಯಿಲೆಯುಳ್ಳವರ ದೇಹದಲ್ಲಿ ರೋಧವಸ್ತುಗಳ ಉತ್ಪತ್ತಿಯಾಗುವುದಿಲ್ಲ ಮತ್ತು ಸ್ವಜಾತಿ ಕಸಿಯನ್ನು ವಿರೋಧಿಸುವ ಶಕ್ತಿಯೂ ಇರುವುದಿಲ್ಲ. ಇದರಿಂದ ನರಳುವವರು ಎರಡು ವರ್ಷ ಬದುಕಿದ್ದರೆ ಹೆಚ್ಚು. ಓಮಗ್ರಂಥಿಯನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕಿದಾಗ ಈ ಕಾಯಿಲೆಗಳು ಪುರ್ತಿ ವಾಸಿಯಾಗುತ್ತವೆಂದು ಹೇಳಲು ಬರುವುದಿಲ್ಲ. ಇದರ ಬಗ್ಗೆ ಸಂಶೋಧನೆ ಇನ್ನೂ ನಡೆಯುತ್ತಿದೆ.			(ಜೆ.ಇ.ಸಿ.ಎಚ್.; ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ